ಕುಪ್ಪುಸ್ವಾಮಿ ಶಾಸ್ತ್ರಿ, ಎಸ್

ಸಂಸ್ಕ್ರತ ಭಾಷೆ ಮತ್ತು ತರ್ಕಶಾಸ್ತ್ರಗಳಲ್ಲಿ ಉದ್ದಾಮ ಪಂಡಿತರಾಗಿದ್ದು ಅವುಗಳ ಏಳಿಗೆಗಾಗಿ ದುಡಿದವರಲ್ಲಿ ಅಗ್ರಗಣ್ಯರು. ಅನೇಕ ಸಂಶೋಧನ ಲೇಖನಗಳು ಮತ್ತು ಸಂಪಾದನ ಕಾರ್ಯದಿಂದ ಮನ್ನಣೆಗೆ ಪಾತ್ರರಾಗಿ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಪಡೆದ ಹಿರಿಯರು. ತಂಜಾವೂರು ಜಿಲ್ಲೆಯಲ್ಲಿ ಕಾವೇರಿ ನದಿತೀರದಲ್ಲಿರುವ ಗಣಪತಿ ಅಗ್ರಹಾರದಲ್ಲಿ ವಾಸಿಸುತ್ತಿದ್ದ ಸೇತುರಾಮ ಅಯ್ಯರೆಂಬುವವರ ನಾಲ್ಕನೆಯ ಮಗನಾಗಿ ಕುಪ್ಪುಸ್ವಾಮಿಶಾಸ್ತ್ರಿಗಳವರು 1880ನೆಯ ಡಿಸೆಂಬರ್ 15ನೆಯ ತಾರೀಖಿನ ದಿನ ಜನಿಸಿದರು.

 ತಿರುವಾಡಿಯಲ್ಲಿ ಸಂಸ್ಕøತ ಭಾಷೆ ಮತ್ತು ಶಾಸ್ತ್ರಗಳನ್ನು ಸಂಪ್ರದಾಯ ರೀತಿಯಲ್ಲಿ ಅಭ್ಯಸಿಸಿ ಆಂಗ್ಲಭಾಷೆಯನ್ನೂ ಚೆನ್ನಾಗಿ ಕಲಿತು. ತಂಜಾವೂರಿನ ಎಸ್.ಪಿ.ಜಿ. ಕಾಲೇಜಿನಲ್ಲಿ ತತ್ತ್ವಶಾಸ್ತ್ರವನ್ನು ವಿಶೇಷ ವಿಷಯವನ್ನಾಗಿ ಆರಿಸಿಕೊಂಡು ಓದಿ 1900ರಲ್ಲಿ ಪದವೀಧರರಾದರು. ಅನಂತರ 1905ರಲ್ಲಿ ಎಂ.ಎ.ಡಿಗ್ರಿಯನ್ನು ಗಳಿಸಿದರು.

 1906 ರಿಂದ 1910 ತನಕ ಮದ್ರಾಸ್ ಸಂಸ್ಕøತ ಕಾಲೇಜಿನ ಮುಖ್ಯಾಧಿಕಾರಿಗಳಾಗಿಯೂ ಅನಂತರ 1910 ರಿಂದ 1914ರ ವರೆಗೆ ತಿರುವಾಡಿಯ ರಾಜಾ ಕಾಲೇಜಿನ ಮುಖ್ಯಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದರು.

 1913ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ನ್ಯಾಯ ವೈಶೇಷಿಕ ದರ್ಶನಗಳಿಗೆ ವಿಶೇಷವಾಗಿ ಸಂಬಂಧಿಸಿದಂತೆ ಭಾರತೀಯ ತತ್ತ್ವಶಾಸ್ತ್ರ ಎಂಬ ವಿಷಯವನ್ನು ಕುರಿತು 20 ಉಪನ್ಯಾಸಗಳನ್ನಿತ್ತರು.

 1914 ರಿಂದ 1936ರ ವರೆಗೆ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕøತ ಮತ್ತು ತುಲನಾತ್ಮಕ ಭಾಷಾಶಾಸ್ತ್ರದ ಪ್ರಾಧ್ಯಾಪಕರೂ ಮತ್ತು ಮದ್ರಾಸ್ ಗೌರ್ನಮೆಂಟ್ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿಯ ಕ್ಯೂರೇಟರರೂ ಆಗಿ ಅಲ್ಲಿನ ತಾಳಪತ್ರಲೇಖಗಳ ವಿವರಣಾತ್ಮಕ ಹಾಗು ತ್ರೈವಾರ್ಷಿಕ ಗ್ರಂಥಪಟ್ಟಿ ಮತ್ತು ಅಕಾರಾದಿ ಪದಸೂಚಿಗಳ 8 ಭಾಗಗಳನ್ನು ಪ್ರಾಧ್ಯಾಪಕ ರಂಗಾಚಾರ್ಯರ ಜೊತೆಯಲ್ಲಿಯೂ 58 ಭಾಗಗಳನ್ನು ಸ್ವತಂತ್ರವಾಗಿಯೂ ಪರಿಷ್ಕರಿಸಿದರು.

 1918ರಲ್ಲಿ ಇಂಡಿಯನ್ ಎಪಿಸ್ಟೊಮಾಲಜಿ (ಭಾರತೀಯ ಪ್ರಮಾಣಶಾಸ್ತ್ರ) ಎಂಬ ವಿಷಯದ ಮೇಲೆ 20 ಉಪನ್ಯಾಸಗಳನ್ನು ಕೊಟ್ಟರು. 1919ರಲ್ಲಿ ಸಂಸ್ಕøತ ಸಾಹಿತ್ಯ ವಿಮರ್ಶೆಯ ವಿಧಾನಗಳು ಮತ್ತು ಸಾಮಗ್ರಿಗಳು ಎಂಬ ವಿಷಯದ ಮೇಲೆ 20 ಉಪಸ್ಯಾಸಗಳನ್ನೂ ಭಾರತೀಯ ದೇವಾಸ್ತಿಕ್ಯ (ಥೀಯಿಸಮ್) ಎಂಬ ವಿಷಯವಾಗಿ ಕೆಲವು ಉಪನ್ಯಾಸಗಳನ್ನೂ ಕೊಟ್ಟರು. 1921ರಲ್ಲಿ ಪ್ರಾಧ್ಯಾಪಕ ರಂಗಾಚಾರ್ಯರೊಡನೆ ಪದ್ಯಚೂಡಾಮಣಿಯನ್ನು ಪರಿಷ್ಕರಿಸಿದರು. ಅನಂತರ 1922ರಲ್ಲಿ ಕಲ್ಕತ್ತೆಯಲ್ಲಿ ನಡೆದ ದ್ವಿತೀಯ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಭಾರತೀಯ ತತ್ತ್ವಶಾಸ್ತ್ರ ಭಾಗದ ಅಧ್ಯಕ್ಷತೆ ವಹಿಸಿ ಪ್ರಾಭಾಕರರ ಕರ್ಮಮೀಮಾಂಸಾ ಸಂಪ್ರದಾಯ ಎಂಬ ವಿಷಯವನ್ನು ಕುರಿತು ಅಧ್ಯಕ್ಷ ಭಾಷಣ ಕೊಟ್ಟರು.

 ಅನಂತರ 1924ರಲ್ಲಿ ಬಾಲಮನೋರಮಾ ಪ್ರೆಸ್‍ನವರಿಂದ ಪ್ರಕಾಶಿತವಾದ ನೀಲಕಂಠ ವಿಜಯ ಚಂಪೂವಿಗೆ ಇಂಗ್ಲಿಷಿನಲ್ಲಿ ಉಪೋದ್ಘಾತವನ್ನು ಬರೆದರು. 1925ರಲ್ಲಿ ಮದ್ರಾಸಿನಲ್ಲಿ ನಡೆದ ತೃತೀಯ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಏರ್ಪಾಟಿನಲ್ಲಿ ಭಾಗವಹಿಸಿ ಅದಕ್ಕಾಗಿ ಫರ್ದರ್ ಲೈಟ್ ಅನ್ ದಿ ಪ್ರಾಭಾಕರ ಪ್ರಾಬ್ಲಮ್ ಮತ್ತು ಬೋಧಾಯನ ಅಂಡ್ ದ್ರಮಿಡಾಚಾರ್ಯ, ಪ್ರೀಸಪೋಸ್ಡ್ ಬೈ ರಾಮಾನುಜ ಎಂಬ ಎರಡು ಲೇಖನಗಳನ್ನು ಬರೆದರು. 1925-26ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ದಿ ಓರಿಯಂಟಲ್ ರೀಸರ್ಚ್ ಇಸ್ಟಿಟ್ಯೂಟನ್ನು ಸ್ಧಾಪಿಸುವುದರಲ್ಲಿ ಪ್ರಮುಖಪಾತ್ರ ವಹಿಸಿದರು. ಅದೇ ವರ್ಷ ಬಾಲಮನೋರಮಾ ಪ್ರೆಸ್‍ನವರಿಂದ ಪ್ರಕಾಶಿತವಾದ ಶಕ್ತಿಭದ್ರನ ಅಶ್ಚರ್ಯ ಚೂಡೂಮಣಿಗೆ ಉಪೋದ್ಘಾತ ಬರೆದರು. ಕಲ್ಕತ್ತೆಯಲ್ಲಿ ನಡೆದ ಹತ್ತನೆಯ ಅಖಿಲ ಭಾರತ ಸಂಸ್ಕøತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಂಸ್ಕøತದಲ್ಲಿ ಅಧ್ಯಕ್ಷ ಭಾಷಣವನ್ನಿತ್ತರು.

 1926ರಲ್ಲಿ ಅಲಹಾಬಾದಿನಲ್ಲಿ ನಡೆದ ನಾಲ್ಕನೆಯ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಅದೇ ವರ್ಷ ವಾರಾಣಸಿಯ ಭಾರತಧರ್ಮ ಮಹಾಮಂಡಲ ವಿದ್ಯಾವಾಚಸ್ಪತಿ ಎಂಬ ಬಿರುದನ್ನು ನೀಡಿ ಇವರನ್ನು ಸನ್ಮಾನಿಸಿತು. ಶಾಸ್ತ್ರಿಗಳು ಮದ್ರಾಸ್ ಸ್ಕಾನ್ಸ್‍ಸ್ಕ್ರಿಟ್ ಅಕಾಡೆಮಿಯನ್ನು ಸ್ಧಾಪಿಸಿ ಅದರ ಪ್ರಥಮಾಧ್ಯಕ್ಷರಾದುದೂ ಅದೇ ವರ್ಷ.

 1927ರಲ್ಲಿ ಸರ್ಕಾರ ಇವರಿಗೆ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಕೊಟ್ಟಿತು. ಅದೇ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಮೀಮಾಂಸಾ ಸಂಪ್ರದಾಯದಲ್ಲಿ ತತ್ತ್ವದರ್ಶನ ಮತ್ತು ವಿವರಣಶಾಸ್ತ್ರ ಎಂಬ ವಿಷಯವಾಗಿ ಶಾಸ್ತ್ರಿಗಳು ರೀಡರ್‍ಷಿಪ್ ಉಪನ್ಯಾಸಗಳನ್ನಿತ್ತರು. ಶಿವಸ್ವಾಮಿ ಅಯ್ಯರ್ ಮತ್ತು ಇನ್ನಿತರರೊಡನೆ ಜರ್ನಲ್ ಆಫ್ ದಿ ಓರಿಯಂಟಲ್ ರೀಸರ್ಚ್ ಮದ್ರಾಸ್ ಎಂಬ ಪತ್ರಿಕೆಯನ್ನು ಹೊರಡಿಸಿದರು. ಅದೇ ಪತ್ರಿಕೆಯಲ್ಲಿ ಇವರು ಸುಂದರ ಪಾಂಡ್ಯ, ಭದನ್ತ ಇತ್ಯಾದಿ ನಾಲ್ಕು ವಿಷಯಗಳನ್ನು ಕುರಿತು ಪ್ರತ್ಯೇಕವಾದ ನಾಲ್ಕು ಲೇಖನಗಳನ್ನು ಬರೆದರು. ಮೀಮಾಂಸಾ ದರ್ಶನದಲ್ಲಿ ವಾಕ್ಯಭೇದ, ಉಪಕ್ರಮ ಮತ್ತು ಉಪಸಂಹಾರ ಎಂಬ ವಿಷಯದ ಮೇಲೆ ರೀಡರ್‍ಷಿಪ್ ಉಪನ್ಯಾಸಗಳನ್ನು ಕೊಟ್ಟರು.

 1929ರಲ್ಲಿ ರಾವಣ ಭಾಷ್ಯ ಎಂಬ ವಿಷಯದ ಮೇಲೆ ಮದ್ರಾಸಿನ ಜೆ. ಓ. ಆರ್. ಪತ್ರಿಕೆಯಲ್ಲಿ ಒಂದು ಲೇಖನವನ್ನೂ ಮದ್ರಾಸ್ ಲೈಬ್ರರಿ ಅಸೋಸಿಯೇಷನ್ನಿನ ಎಸ್ಸೇಸ್ ಬೈ ಡೈವರ್ಸ್ ಹ್ಯಾಂಡ್ಸ್ ಎಂಬ ಗ್ರಂಥಭಾಗದಲ್ಲಿ ಕೋಶವಾನ್ ಆಚಾರ್ಯ ಎಂಬ ವಿಷಯದ ಮೇಲೆ ಒಂದು ಲೇಖನವನ್ನೂ ಇವರು ಬರೆದಿದ್ದಾರೆ. ಅಲ್ಲದೆ ನ್ಯಾಯಶಾಸ್ತ್ರದ ಮೇಲೆ ಥಾಟ್ ಮೆಷರಿಂಗ್ ಡಿವೈಸಸ್ ಇನ್ ಇಂಡಿಯನ್ ಡಯಲೆಕ್ಟಿಕ್ಸ್ ಎಂಬ ವಿಷಯವಾಗಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರೀಡರ್‍ಷಿಪ್ ಉಪನ್ಯಾಸಗಳನ್ನು ಕೊಟ್ಟಿದ್ದಾರೆ.

 1930ರಲ್ಲಿ ಪಾಲ್ಘಾಟಿನ ಪಂಡಿತ ವ್ಯಾಸರಾಯಶಾಸ್ತ್ರೀ ವಾಧ್ಯಾರ್ ಅಂಡ್ ಸನ್ಸ್‍ರವರಿಂದ ಪರಿಷ್ಕ್ರತವಾದ ನೈಷ್‍ಧೀಯ ಚರಿತೆಗೆ ಮುನ್ನುಡಿ ಬರೆದುಕೊಟ್ಟರು. ಅನಂತರ 1931ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಹೈವೇಸ್ ಅಂಡ್ ಬೈವೇಸ್ ಆಫ್ ಲಿಟರೆರಿ ಕ್ರಿಟಿಸಿಸ್ಮ್ ಇನ್ ಸ್ಯಾನ್ಸ್‍ಸ್ಕ್ರಿಟ್ ಎಂಬ ವಿಷಯದ ಮೇಲೆ ನಾಲ್ಕು ಉಪನ್ಯಾಸಗಳನ್ನಿತ್ತರು. ಅಲ್ಲದೆ ಅದೇ ವರ್ಷ ಮದ್ರಾಸಿನ ಜೆ. ಓ. ಆರ್.ನಲ್ಲಿ ಪ್ರಕಾಶಿತವಾದ ವೀಣಾವಾಸವದತ್ತೆಯನ್ನು ಪರಿಷ್ಕರಿಸಿದರು.

 1932ರಲ್ಲಿ ಟಿ.ವಿ. ರಾಮಚಂದ್ರ ದೀಕ್ಷಿತರೊಡನೆ ಮಂಡನ ಮಿಶ್ರರ ವಿಭ್ರಮ ವಿವೇಕವನ್ನು ಪರಿಷ್ಕರಿಸಿದರು. ಅದೇ ವರ್ಷ ಪ್ರೈಮರ್ ಆಫ್ ಇಂಡಿಯನ್ ಲಾಜಿಕ್ ಎಂಬ ಪುಸ್ತಕವನ್ನು ಬರೆದರು. ಅಲ್ಲದೆ ಧ್ವನ್ಯಾಲೋಕ ಮತ್ತು ಲೋಚನಗಳನ್ನೂ ಕೌಮುದಿ ಮತ್ತು ತಮ್ಮದೇ ಆದ ಉಪಲೋಚನಗಳೊಡನೆ ಪರಿಷ್ಕರಿಸಲು ಪ್ರಾರಂಭಿಸಿದರು. ಅದೇ ವರ್ಷ ಕಾಮಕೋಟಿ ಪೀಠದ ಶಂಕರಾಚಾರ್ಯರಿಂದ ದರ್ಶನಕಲಾನಿಧಿ ಎಂಬ ಬಿರುದನ್ನೂ 1933ರಲ್ಲಿ ಪೂರಿಯ ಗೋವರ್ಧನ ಮಠದ ಶಂಕರಾಚಾರ್ಯರಿಂದ ಕುಲಪತಿ ಎಂಬ ವಿರುದನ್ನೂ ಪಡೆದರು. ಅದೇ ವರ್ಷ ಮದ್ರಾಸ್ ಲಾ ಜರ್ನಲ್ ಪ್ರೆಸ್‍ನವರ ವಾಲ್ಮೀಕಿ ರಾಮಾಯಣದ ಪರಿಷ್ಕರಣದಲ್ಲಿ ಸಹಾಯಕರಾಗಿ ದುಡಿದು ಅದಕ್ಕೆ ಮುನ್ನುಡಿ ಬರೆದರು. ಅಲ್ಲದೆ ಆಲ್ಮೋರದ ಮಾಯಾವತೀ ಆಶ್ರಮದ ಬೃಹದಾರಣ್ಯಕ ಭಾಷ್ಯಕ್ಕೆ ಮಾಧವಾನಂದರು ಬರೆದ ಭಾಷಾಂತರಕ್ಕೆ ಉಪೋದ್ಘಾತವನ್ನು ಬರೆದುಕೊಟ್ಟರು.

 1934ರಲ್ಲಿ ವಾಲ್ಟೇರಿನಲ್ಲಿ ನಡೆದ ಹತ್ತನೆಯ ಅಖಿಲಭಾರತ ತತ್ತ್ವಶಾಸ್ತ್ರ ಸಮ್ಮೇಳನದ ಭಾರತೀಯ ತತ್ತ್ವಶಾಸ್ತ್ರ ಭಾಗದ ಅಧ್ಯಕ್ಷತೆ ವಹಿಸಿ ಪುರಾಣಇಸ್ಮ್ ಇನ್ ಇಂಡಿಯನ್ ಥಾಟ್ ಎಂಬ ವಿಷಯದ ಮೇಲೆ ಅಧ್ಯಕ್ಷ ಭಾಷಣವನ್ನು ಕೊಟ್ಟರು.

 1935ರಲ್ಲಿ ನ್ಯಾಯವೈಶೇಷಿಕ ಮತದಲ್ಲಿ ಪ್ರಕೃತಿ, ಜೀವಾತ್ಮ ಮತ್ತು ಪರಮಾತ್ಮ ಎಂಬ ವಿಷಯದ ಮೇಲೆ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರೀಡರ್‍ಷಿಪ್ ಉಪನ್ಯಾಸಗಳನ್ನಿತ್ತರು. ಮದ್ರಾಸಿನ ಲೈಬ್ರರಿ ಅಸೋಸಿಯೇಷನ್ನಿನ ವಾರ್ಷಿಕ ವರದಿಯಲ್ಲಿ ಲೈಬ್ರರಿ ಸೈನ್ಸ್ ಆಸ್ ವ್ಯೂಡ್ ಬೈ ಎ ಕ್ಲ್ಯಾಸಿಸ್ಟ್ ಎಂಬ ಲೇಖನವನ್ನು ಬರೆದರು.

 ಮೈಸೂರಿನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಪಂಡಿತ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಿ ಸಿನ್ಧೆಸಿಸ್ ಆಫ್ ಲರ್ನಿಂಗ್ ಅಂಡ್ ರೀಸರ್ಚ್ ಎಂಬ ವಿಷಯದ ಮೇಲೆ ಸಂಸ್ಕøತದಲ್ಲಿ ಭಾಷಣವನ್ನಿತ್ತರು.

 ಅದೇ ವರ್ಷವೇ ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನ ಸಂಸ್ಕ್ರತ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದದ್ದು. ಅನಂತರ ಮದ್ರಾಸ್ ವಿಶ್ವವಿದ್ಯಾಲಯದ ಹೊಸ ಕ್ಯಾಟಲಾಗಸ್ ಕ್ಯಾಟಲಾಗೊರಮ್ಮಿಗೆ ಮುಖ್ಯಸಂಪಾದಕರಾಗಿ ಕಾರ್ಯವನ್ನಾರಂಭಿಸಿದರು.

 ಅದೇ ವರ್ಷ ಮದ್ರಾಸ್ ಗೌರ್ನಮೆಂಟ್ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿ ಸೀರೀಸಿನಲ್ಲಿ ವಿಮರ್ಶಾತ್ಮಕವಾದ ಉಪೋದ್ಘಾತಾದಿಗಳನ್ನು ಬರೆದು ಶಂಖಪಾಣಿಯ ಭಾಷ್ಯದೊಡನೆ ಮಂಡನಮಿಶ್ರರ ಬ್ರಹ್ಮಸಿದ್ಧಿಯನ್ನು ಪರಿಷ್ಕರಿಸಿದರು. ಪುಣೆಯಲ್ಲಿನ ಭಂಡಾರಕರ್ ಓರಿಯಂಟಲ್ ರೀಸರ್ಚ್ ಇನ್‍ಸ್ಟಿಟ್ಯೂಟಿನ ಹನ್ನೆಂದನೆಯ ವಾರ್ಷಿಕೋತ್ಸವದಲ್ಲಿ ಅದ್ವೈತ ಚರಿತ್ರೆಯಲ್ಲಿ ಮಂಡನ-ಸುರೇಶ್ವರರ ಸಮೀಕರಣ ಎಂಬ ವಿಷಯವನ್ನು ಕುರಿತು ಭಾಷಣಮಾಡಿದರು.

 ಅದೇ ವರ್ಷ ಚಿದಂಬರದ ಅಣ್ಣಾಮಲೈ ವಿಶ್ವವಿದ್ಯಾಲಯದ ಸಂಸ್ಕøತ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾದರು.

 1937ರಲ್ಲಿ ಶ್ರೀರಾಮಕೃಷ್ಣ ಮತ್ತು ಹಿಂದೂ ಧರ್ಮದ ಸಂದೇಶ ಎಂಬ ವಿಷಯವನ್ನು ಕುರಿತು ತ್ರಿವೇಣಿಯಲ್ಲಿ ಒಂದು ಬರೆದರು.

 1940ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದ ಕೃಷ್ಣಸ್ವಾಮಿ ರಾವ್ ಉಪನ್ಯಾಸಮಾಲೆಯಲ್ಲಿ ಕಾಮ್ಪ್ರೊಮೈಸಸ್ ಇನ್ ದಿ ಹಿಸ್ಟರಿ ಆಫ್ ಅದ್ವೈತಿಕ್ ಥಾಟ್ ಎಂಬ ವಿಷಯದ ಮೇಲೆ ಉಪನ್ಯಾಸಗಳನ್ನಿತ್ತರು. ಅನಂತರ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ತಮ್ಮ ಹಳ್ಳಿಯಲ್ಲಿ ನೆಲಸಿದರು.

 ತಾರೀಖ 5-9-1943ರಲ್ಲಿ ಶಾಸ್ತ್ರಿಗಳು ಗಣಪತಿ ಅಗ್ರಹಾರದಲ್ಲಿ ಅಸು ನೀಗಿದರು.   

(ಪಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ